ಪುಷ್ಯಭೂತಿ ವಂಶ  -
	ದೆಹಲಿಯ ಸಮೀಪದ ತಾನೇಶ್ವರದಲ್ಲಿ ಪುಷ್ಯಭೂತಿ ಎಂಬುವನಿಂದ ಆರಂಭವಾದ ರಾಜವಂಶ. ಗುಪ್ತ ಸಾಮ್ರಾಜ್ಯದ ಪತನದಿಂದ ಸಂಭವಿಸಿದ ಅರಾಜಕತೆಯ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ಈ ಮನೆತನದವರು ಇತಿಹಾಸದಲ್ಲಿ ಸ್ಥಾನೇಶ್ವರದ ವರ್ಧನರೆಂದೂ ಪ್ರಸಿದ್ಧರಾಗಿದ್ದಾರೆ. ಪುಷ್ಯಭೂತಿ ಸುಮಾರು 455ರಲ್ಲಿ ಸಣ್ಣ ರಾಜ್ಯವೊಂದರ ನಿರ್ಮಾಣಕ್ಕೆ ಬುನಾದಿ ಹಾಕಿದನೆಂದು ತಿಳಿದುಬರುತ್ತದೆ. ಪುಷ್ಯಭೂತಿಯನ್ನು ಬಾಣ ಹಲವಾರು ವಿಶೇಷಣಗಳಿಂದ ಹೊಗಳಿದ್ದನಾದರೂ ಇದರಿಂದ ಅವನ ರಾಜಕೀಯ ಸಾಧನೆಗಳ ಬಗ್ಗೆ ನಿರ್ದಿಷ್ಟ ಅಭಿಪ್ರಾಯವನ್ನು ಹೇಳಲು ಸಾಧ್ಯವಾಗುವುದಿಲ್ಲ. ಈ ಮನೆತನದ ರಾಜರು ಚಂದ್ರವಂಶದ ಕ್ಷತ್ರಿಯರೆಂದು ಹೇಳಲಾಗಿದೆ. ಪರಮ ಶಿವಭಕ್ತನಾದ ಪುಷ್ಯಭೂತಿಯನ್ನು ಪರಮ ಮಹೇಶ್ವರನೆಂದು ಬಾಣ ಕರೆದಿದ್ದಾನೆ. ಇವನ ಮರಣಾನಂತರ ಆಳಿದ ದೊರೆಗಳ ನಾಮಾವಳಿ ಮತ್ತು ಸಾಧನೆಗಳ ವಿಚಾರವಾಗಿ ಬಾಣನ ಕೃತಿಯಿಂದ ಯಾವ ಹೆಚ್ಚಿನ ಮಾಹಿತಿಯೂ ದೊರೆಯುವುದಿಲ್ಲ. ಪುಷ್ಯಭೂತಿಯಿಂದ ಪ್ರಭಾಕರ ವರ್ಧನನವರೆಗೂ ಆಳಿದ ಈ ವಂಶದ ರಾಜ ಸಮರ್ಥ ಯೋಧರಾಗಿದ್ದರೆಂಬ ಅಂಶ ಮಾತ್ರ ವ್ಯಕ್ತವಾಗುತ್ತದೆ. ಹರ್ಷನಿಗಿಂತ ಹಿಂದೆ ಆಳಿದ ಈ ಸಂತತಿಯ ದೊರೆಗಳ ಪಟ್ಟಿ ಹರ್ಷನ ಕಾಲದ ಹಲವು ಶಾಸನಗಳಿಂದ ದೊರೆಯುತ್ತದೆ. ಆದರೆ, ಇವುಗಳಲ್ಲಿ ಪುಷ್ಯಭೂತಿಯ ಹೆಸರು ಇಲ್ಲ. ಈ ಶಾಸನಗಳಲ್ಲಿ ಕೊಟ್ಟಿರುವ ವಂಶಾವಳಿ ನರವರ್ಧನನಿಂದ ಪ್ರಾರಂಭವಾಗುತ್ತದೆ. ನರವರ್ಧನ ಮತ್ತು ಪುಷ್ಯಭೂತಿಯ ಆಳ್ವಿಕೆಗಳ ನಡುವೆ 45 ಅಥವಾ 50 ವರ್ಷಗಳ ಅಂತರವಿರಬೇಕೆಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಅವನ ಅನಂತರ ಆಳಿದ ಈ ಸಂತತಿಯ ರಾಜರ ಆಳ್ವಿಕೆಯ ಕಾಲಗಳನ್ನು ಈ ರೀತಿ ನಿರ್ಧರಿಸಲಾಗಿದೆ. 

ಪುಷ್ಯಭೂತಿ (ಸು. 455-ಸು. 475)

ನರವರ್ಧನ (ಸು. 505-ಸು. 525)

1 ನೆಯ ರಾಜ್ಯವರ್ಧನ (ಸು. 525-ಸು. 545)

ಆದಿತ್ಯವರ್ಧನ (ಸು. 545-ಸು. 565)

ಪ್ರಭಾಕರವರ್ಧನ (ಸು. 565-ಸು. 605)

2 ನೆಯ ರಾಜ್ಯವರ್ಧನ (ಸು. 605-606)

ಹರ್ಷವರ್ಧನ (606-547)

ಪುಷ್ಯಭೂತಿ ಮತ್ತು ನರವರ್ಧನರ ನಡುವೆ ಇಬ್ಬರು ಅಥವಾ ಮೂವರು ರಾಜರು ಆಳಿರಬೇಕೆಂದು ಅಭಿಪ್ರಾಯಪಡಲಾಗಿದೆ. ಆದರೆ ಅವರ ಹೆಸರುಗಳು ತಿಳಿದುಬಂದಿಲ್ಲ. ನರವರ್ಧನನನ್ನು ಶಾಸನಗಳಲ್ಲಿ ಮಹಾರಾಜನೆಂದು ಕರೆದಿದ್ದರೂ ಅವನು ಗುಪ್ತರ ಸಾಮಂತನಾಗಿದ್ದಿರಬೇಕು. ಅವನ ರಾಣಿ ವಜ್ರಿಣಿದೇವಿ. ಅವನ ಅನಂತರ ಆಳಿದ 1ನೆಯ ರಾಜ್ಯವರ್ಧನನ ಕಾಲದಲ್ಲಿ ಗುಪ್ತರೊಂದಿಗೆ ವೈವಾಹಿಕ ಸಂಬಂಧವೇರ್ಪಟ್ಟಿತು. ರಾಜ್ಯವರ್ಧನನ ಮಗ ಆದಿತ್ಯವರ್ಧನ ಕೊನೆಯ ಗುಪ್ತರ ರಾಜನಾದ ಮಹಾಸೇನಗುಪ್ತನ ಸಹೋದರಿ ಮಹಾಸೇನ ಗುಪ್ತದೇವಿಯನ್ನು ವಿವಾಹವಾದ್ದು ರಾಜಕೀಯ ದೃಷ್ಟಿಯಿಂದ ಬಹಳ ಮಹತ್ವಪೂರ್ಣ ಘಟನೆ. ಈ ವಿವಾಹ ಸಂಬಂಧದಿಂದ ಆದಿತ್ಯವರ್ಧನನ ಪುಟ್ಟ ರಾಜ್ಯದ ವಿಸ್ತರಣೆಗೆ ಅನುಕೂಲವಾಗಿರಬಹುದು. ಅವನ ಅನಂತರ ಆಳಿದ ಪ್ರಭಾಕರವರ್ಧನ ಸಮರ್ಥನೂ ಶೂರನೂ ಆಗಿದ್ದು ಸ್ವತಂತ್ರ ರಾಜನೆನಿಸಿಕೊಂಡ. ಬಾಣ ಇವನನ್ನು ಮಹಾರಾಜಾಧಿರಾಜ, ಪರಮಭಟ್ಟಾರಕ ಎಂದು ವರ್ಣಿಸಿದ್ದಾನೆ. ಪ್ರಭಾಕರವರ್ಧನ ಸಿಂಧೂ ಮತ್ತು ಲಾಟ ಪ್ರಾಂತಗಳನ್ನು ಆಕ್ರಮಿಸಿ ತನ್ನ ರಾಜ್ಯದ ಘನತೆಯನ್ನು ಎತ್ತರಿಸಿದ. ಅವನ ಅನಂತರ ಪಟ್ಟಕ್ಕೆ ಬಂದ 2 ನೆಯ ರಾಜವರ್ಧನನ ಆಳ್ವಿಕೆ ಆಕಸ್ಮಿಕವಾಗಿ ಕೊನೆಗೊಂಡಾಗ ಅವನ ಸಹೋದರ ಹರ್ಷವರ್ಧನ ಪಟ್ಟಕ್ಕೆ ಬಂದ. ಇತಿಹಾಸ ಪ್ರಸಿದ್ಧನಾದ ಹರ್ಷ ಚಕ್ರವರ್ತಿ ತನ್ನ ಧರ್ಮ, ಸಾಹಿತ್ಯ ಪೋಷಣೆ ಮೊದಲಾದ ಬಹುಮುಖ್ಯ ಸಾಧನೆಗಳಿಂದ ಖ್ಯಾತನಾಗಿದ್ದಾನೆ. ಹರ್ಷವರ್ಧನನಿಗೆ ಮಕ್ಕಳಿರಲಿಲ್ಲ. ಅವನ ಸುಮಾರು ನಲವತ್ತು ವರ್ಷಗಳ ಆಳ್ವಿಕೆಯೊಂದಿಗೆ ಪುಷ್ಯಭೂತಿ ವಂಶ ಕೊನೆಗೊಂಡಿತು.											 (ಎಸ್.ಎಚ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ